ಮೈಸೂರು: ಅಂತಿಮ ಕ್ಷಣದಲ್ಲಿ ತಿಪಟೂರು ಶಾಸಕ ಷಡಕ್ಷರಿ ಅವರನ್ನು ಕೈಬಿಟ್ಟು ತಮ್ಮ ಆಪ್ತ ಸ್ನೇಹಿತನ ಪತ್ನಿ ಗೀತಾ ಮಹಾದೇವ ಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಿರುವುದು ಸಿದ್ದರಾಮಯ್ಯ ಅವರ ರಾಜಕೀಯ ಲೆಕ್ಕಾಚಾರದ ಭಾಗವಾಗಿದೆ. ಆದರೆ ಅವರು ಇದೇ ವೇಳೆ ಸ್ವಪಕ್ಷದವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆ ಪ್ರಚಾರದ ವೇಳೆ , ಗೀತಾ ಪ್ರಸಾದ್ ಅವರನ್ನು ಗೆಲ್ಲಿಸಿದರೇ ಗೀತಾ ಅವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಸಿಎಂ ಹೇಳಿದ್ದರು. ಆ ವೇಳೆ ಸಿದ್ದರಾಮಯ್ಯ ಅವರ ಮಾತನ್ನು ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ, ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ,
ಸಂಪುಟ ವಿಸ್ತರಣೆ ವೇಳೆ ಹಿರಿಯ ಶಾಸಕ ಷಡಕ್ಷರಿ ಮತ್ತು ಬೆಳಗಾವಿ ಜಿಲ್ಲೆಯ ಅಶೋಕ್ ಪಟ್ಟಣ್ ಹೆಸರುಗಳು ಕೇಳಿ ಬಂದಿದ್ದವು. ಷಡಕ್ಷರಿ ಕೂಡ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ.
ವೀರಶೈವ ಮಠ ಮತ್ತು ಕಾಂಗ್ರೆಸ್ ನಡುವೆ ಸೇತುವೆಯಾಗಿದ್ದ ಎಚ್ .ಎಸ್ ಮಹಾದೇವ ಪ್ರಸಾದ್ ನಿಧನದ ನಂತರ ಹಳೇ ಮೈಸೂರು ಭಾಗದಲ್ಲಿ ಪ್ರಬಲ ಲಿಂಗಾಯತ ನಾಯಕರ ಕೊರತೆಯಿತ್ತು. ಸಚಿವ ಸ್ಥಾನಕ್ಕೆ ಸಿಎಂ ಬೇರೆ ಲಿಂಗಾಯತ ಶಾಸಕರನ್ನು ನೇಮಿಸಬಹುದಿತ್ತು, ಆದರೆ ಮಹಿಳೆಯರಿಗೆ ಮತ್ತಷ್ಟು ಪ್ರಾತಿನಿಧ್ಯ ನೀಡುವ ಸಲುವಾಗಿ ಗೀತಾ ಅವರಿಗೆ ಸಚಿವ ಸ್ಛಾನ ನೀಡರುವುದಾಗಿ ಸಿಎಂ ಸಮರ್ಥಿಸಿಕೊಂಡಿದ್ದಾರೆ.
ವೀರಶೇವ-ಲಿಂಗಾಯತ ಸಮುದಾಯಗಳನ್ನು ವಿಭಿಜಿಸಲು ಸಿದ್ದರಾಮಯ್ಯ ಸರ್ಕಾರ ಯತ್ನಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಗಳಿಗೆ ಪ್ರತ್ಯುತ್ತರ ನೀಡಲು ಸಿಎಂ ಗೀತಾ ಅವರಿಗೆ ಸ್ಥಾನ ನೀಡಿದ್ದಾರೆ. ಜೆಎಸ್ ಎಸ್ ಮಠದ ಗುಡ್ ವಿಲ್ ಸಂಪಾದಿಸಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯಗೆ ಗೀತಾ ಅವರ ಸಂಪುಟ ಸೇರ್ಪಡೆ ವರದಾನವಾಗಲಿದೆ ಎಂದು ಭಾವಿಸಲಾಗಿದೆ.ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಜೆಎಸ್ ಎಸ್ ಮಠ ಹೆಚ್ಚಿನ ಪ್ರಾಬಲ್ಯ ಹೊಂದಿದೆ.
ಮಠಗಳ ಆಶೀರ್ವಾದವಿದ್ದರೇ ತಮ್ಮ ಪುತ್ರ ಯತೀಂದ್ರನ ರಾಜಕೀಯ ಹಾದಿ ಸುಗುಮವಾಗಲಿದೆ ಎಂಬುದು ಸಿಎಂ ನಂಬಿಕೆ. ವರುಣಾ ಕ್ಷೇತ್ರದಿಂದ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಯತೀಂದ್ರ ಸಿದ್ಧತೆ ನಡೆಸಿದ್ದಾರೆ. ವರುಣಾ ಕ್ಷೇತ್ರದಲ್ಲಿ ವೀರಶೈವ ಸಮುದಾಯದ ಪ್ರಾಬಲ್ಯವಿದೆ, ಇನ್ನೂ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದು, ಲೋಕೋಪಯೋಗಿ ಸಚಿವ ಮಹಾದೇವಪ್ಪ ನಂಜನಗೂಡು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ವೀರಶೈವರ ಬೆಂಬಲ ಪಡೆದಿರುವ ಶಾಸಕ ಷಡಕ್ಷರಿ ಅವರನ್ನು ಸಿಎಂ ನಿರ್ಲಕ್ಷ್ಯಿಸಿಲ್ಲ.
ಗೀತಾ ಮಹಾದೇವ ಪ್ರಸಾದ್ ಮುಂದಿದೆ ದೊಡ್ಡ ಸವಾಲು
ಸಂಪುಟಕ್ಕೆ ಸೇರಿರುವ ಗೀತಾ ಮಹಾದೇವ ಪ್ರಸಾದ್ ಅವರ ಹಾದಿ ಮುಳ್ಳಿನ ಹಾಸಿಗೆಯಾಗಿಲ್ಲ, ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅರು ನಿರೀಕ್ಷೆಯಂತೆ ಗೀತಾ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ. ಮುಂದಿನ 7 ತಿಂಗಳಲ್ಲಿ ಪ್ರಬಲ ಲಿಂಗಾಯತ ಮಖಂಡ ಎಂದು ಗುರುತಿಸಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಶಕ್ತಿಯನ್ನು ಹಳೇಯ ಮೈಸೂರು ಭಾಗದಲ್ಲಿ ಕಡಿಮೆ ಮಾಡುವ ದೊಡ್ಡ ಸವಾಲು ಗೀತಾ ಮುಂದಿದೆ. ಒಂದು ವೇಳೆ ಇದರಲ್ಲಿ ಗೀತಾ ವಿಫಲವಾದರೇ ಸಿದ್ದರಾಮಯ್ಯ ಅವರ ಚಾಣಾಕ್ಷ ನಡೆಗೆ ಯಾವುದೇ ಲಾಭವಿರುವುದಿಲ್ಲ ಎಂದು ರಾಜಕೀಯ ವಿಮರ್ಶಕ ಪ್ರೊ. ಮುಜಾಫರ್ ಆಸಾದಿ ಹೇಳಿದ್ದಾರೆ.
ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿರುವುದಕ್ಕೆ ಷಡಕ್ಷರಿ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ನಾನು 1980 ರಿಂದ ಕಾಂಗ್ರೆಸ್ ನಲ್ಲಿದ್ದೇನೆ, ಎರಡು ಬಾರಿ ಶಾಸಕನಾಗಿದ್ದೇನೆ, ಈ ಸಂಬಂಧ ಸಿಎಂ ನನ್ನ ಬಳಿ ಚರ್ಚಿಸಿದ್ದರು. ನಾನು ಸಂಪುಟಕ್ಕೆ ಸೇರಬೇಕಿತ್ತು. ನನಗೆ ಸ್ಥಾನ ಸಿಕ್ಕಿಲ್ಲ, ಆದರೆ ನಾನು ನಿರಾಶೆಗೊಂಡಿಲ್ಲ ಎಂದು ಶಾಸಕ ಷಡಕ್ಷರಿ ಹೇಳಿದ್ದಾರೆ. ಮೊದಲ ಬಾರಿಗೆ ಶಾಸಕಿಯಾಗಿರುವ ಗೀತಾ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಿರುವುದಕ್ಕೆ ಮಾಜಿ ಸಚಿವರು ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.