ಧೋನಿ ಬಳಿ ಇನ್ನೂ ಸಾಕಷ್ಟು ಕ್ರಿಕೆಟ್ ಇದೆ: ಮಾಜಿ ನಾಯಕನನ್ನು ಶ್ಲಾಘಿಸಿದ ಕೋಚ್ ರವಿಶಾಸ್ತ್ರಿ

ಕೊಲಂಬೋ: ಭಾರತ ತಂಡದ ವಿಕೆಟ್ ಕೀಪರ್ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಳಿ ಇನ್ನೂ ಸಾಕಷ್ಟು ಕ್ರಿಕೆಟ್ ಇದ್ದು, ಧೋನಿ ದೇಶದ ಲೆಜೆಂಡ್ ಆಟಗಾರರಲ್ಲಿ ಒಬ್ಬರು, ಅವರ ಸೇವೆ ಇನ್ನೂ ತಂಡಕ್ಕೆ ಬೇಕಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ನಾಲ್ಕನೇ ಪಂದ್ಯ ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರವಿಶಾಸ್ತ್ರಿ, ಭಾರತ ಕ್ರಿಕೆಟ್ ಕ್ಷೇತ್ರದ ಲೆಜೆಂಡ್ ಆಟಗಾರರಲ್ಲಿ ಧೋನಿ ಕೂಡ ಒಬ್ಬರು. ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಇದೆ. ಕ್ರಿಕೆಟ್ ರಂಗದಲ್ಲಿ ಧೋನಿ ಇನ್ನೂ ಅರ್ಧದಷ್ಟು ದಾರಿಯನ್ನು ಪೂರ್ಣಗೊಳಿಸಿಲ್ಲ ಎಂದು ಹೇಳುವ ಮೂಲಕ 2019ರ ವಿಶ್ವಕಪ್ ತಂಡದಲ್ಲಿ ಧೋನಿ ಇರುತ್ತಾರೆ ಎಂಬುದನ್ನು ರವಿಶಾಸ್ತ್ರಿ ಪರೋಕ್ಷವಾಗಿ ಸೂಚಿಸಿದ್ದಾರೆ. ಅಂತೆಯೇ ಧೋನಿ ದೇಶಕಂಡ ಅತ್ಯುತ್ತಮ ವಿಕೆಟ್ ಕೀಪರ್ ಗಳಲ್ಲಿ ಒಬ್ಬರಾಗಿದ್ದು, ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಬಿಟ್ಟರೂ ಅವರ ಕೀಪಿಂಗ್ ಸಾಮರ್ಥ್ಯವೇ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವಂತೆ ಮಾಡುತ್ತದೆ. ನಾ ಕಂಡಂತೆ ವಿಕೆಟ್ ಕೀಪಿಂಗ್ ನಲ್ಲಿ ಧೋನಿ ಪರ್ಯಾಯವೇ ಇಲ್ಲ ಎಂಬಂತಾಗಿದೆ ಎಂದು ಶಾಸ್ತ್ರಿ ಹೇಳಿದ್ದಾರೆ.

ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಕೂಡ ತಮ್ಮ 36ನೇ ವಯಸ್ಸಿನಲ್ಲಿ ತಂಡದಲ್ಲಿದ್ದರು. ಅವರನ್ನು ಬದಲಿಸಲು ಸಾಧ್ಯವಾಗಿತ್ತೆ. ಅವರಲ್ಲಿ ಸಾಕಷ್ಟು ಕ್ರಿಕೆಟ್ ಇತ್ತು. ಧೋನಿಯಲ್ಲೂ ಕೂಡ ಇನ್ನೂ ಸಾಕಷ್ಟು ಕ್ರಿಕೆಟ್ ಇದೆ. ಭಾರತ ತಂಡದ ಮೇಲೆ ಧೋನಿ ಅವರು ತುಂಬಾ ಪ್ರಭಾವ ಬೀರಿದ್ದು, ಡ್ರೆಸಿಂಗ್ ರೂನಲ್ಲಿ ಧೋನಿ ಲೆಜೆಂಡ್ ಆಟಗಾರ. 2019ರ ವಿಶ್ವಕಪ್ ಟೂರ್ನಿಯವರೆಗೂ ತಂಡದಲ್ಲಿ ಸಾಕಷ್ಟು ಯೋಜನೆ ರೂಪಿಸಲಾಗುತ್ತದೆ. ತಮ್ಮ ಯೋಜನೆಯಲ್ಲಿ ಧೋನಿ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ ಎಂದು ಶಾಸ್ತ್ರಿ ಹೇಳಿದರು.

ಇದೇ ವೇಳೆ 2019ರ ವಿಶ್ವಕಪ್ ಟೂರ್ನಿಯ ಕುರಿತು ಮಾತನಾಡಿದ ಶಾಸ್ತ್ರಿ, ತಂಡದಲ್ಲಿನ ರೊಟೇಶನ್ ಪದ್ಧತಿಯನ್ನು ಮುಂದುವರೆಸಲಾಗುತ್ತದೆ. ಆ ಮೂಲಕ ತಂಡದ ಪ್ರತೀಯೊಬ್ಬ ಆಟಗಾರನ ಸಾಮರ್ಥ್ಯವನ್ನು ಪರೀಕ್ಷೆಗೆ ಹಚ್ಚಬೇಕಿದೆ. ಪ್ರಸ್ತುತ ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ ನಮ್ಮ ತಂಡ ಸೋಲು-ಗೆಲುವಿನ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ತಂಡದ ಪ್ರತಿಯೊಬ್ಬ ಆಟಗಾರನ ಫಿಟ್ನೆಸ್ ಹಾಗೂ ಫಾರ್ಮ್ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಲಾಗುತ್ತದೆ. ತಂಡದಲ್ಲಿ ಎಲ್ಲ ಬಗೆಯ ಪ್ರಯೋಗ ಮಾಡಲಾಗುತ್ತದೆ. ಯಾವ ಆಟಗಾರ ಯಾವ ಶ್ರೇಣಿಯಲ್ಲಿ ಬ್ಯಾಟಿಂಗ್ ಮಾಡಬಲ್ಲ. ಯಾವ ಬೌಲರ್ ವಿಕೆಟ್ ಪಡೆಯಬಲ್ಲ ಎಂಬ ವಿಚಾರವಾಗಿ ಪ್ರಯೋಗಗಳು ನಿರಂತರವಾಗಿ ಸಾಗುತ್ತದೆ.

ಆಟಗಾರರು ಮಾಡುವ ತಪ್ಪಿನಿಂದಾಗಿಯೇ ಅವರು ಸ್ಥಾನ ಕಳೆದುಕೊಂಡು ಇತರೆ ಆಟಗಾರರಿಗೆ ಸ್ಥಾನ ಬಿಟ್ಟುಕೊಡುವಂತಾಗುತ್ತದೆ ಎಂದು ಹೇಳುವ ಮೂಲಕ ಆಟಗಾರರಿಗೆ ಶಾಸ್ತ್ರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ 2019ರ ವಿಶ್ವಕಪ್ ಮೇಲೆ ಕಣ್ಣು ನೆಟ್ಟಿರುವ ಕೋಚ್ ರವಿಶಾಸ್ತ್ರಿ ಆ ನಿಟ್ಟಿನಲ್ಲಿ ತಂಡ ರಚನೆಗೆ ಮುಂದಾಗಿದ್ದು, ಶ್ರೀಲಂಕಾ ಸರಣಿಯಲ್ಲಿ ಸಾಕಷ್ಟು ಪ್ರಯೋಗಗಳನ್ನು ನಡೆಸುತ್ತಿದ್ದಾರೆ.

READ MORE